ಮಂಗೇಶರಾವ್, ಉಲ್ಲಾಳ
	1878-1942, ಭಾಷಾ ಸೇವಕರು ಹಾಗೂ ಶಿಕ್ಷಣತಜ್ಞರು. ಹುಟ್ಟಿದ್ದು ಮಂಗಳೂರಿನ ಕೊಂಕಣಿ ಸಾರಸ್ವತ ಬ್ರಾಹ್ಮಣ ಕುಟುಂಬವೊಂದರಲ್ಲಿ. ಇವರು ಮಂಗಳೂರಿನಲ್ಲಿ ವ್ಯಾಸಂಗ ಮಾಡಿ ಬಿ.ಎ., ಎಲ್.ಟಿ. ಪದವೀಧರರಾಗಿ ಅಂದಿನ ಮದರಾಸು ಸರ್ಕಾರದ ವಿದ್ಯಾ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು. ಕೊಡಗು, ಬಳ್ಳಾರಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶಾಲಾ ಇನ್‍ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದರು. 1924ರಲ್ಲಿ ಮಂಗಳೂರಿನ ಗೌರ್ನಮೆಂಟ್ ಹೈಯರ್ ಎಲಿಮೆಂಟರಿ ಪ್ರಶಿಕ್ಷಣ (ಟ್ರೈನಿಂಗ್) ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಅಲ್ಲಿಯೇ ನಿವೃತ್ತರಾದರು. ಆ ಶಾಲೆಯಲ್ಲಿದ್ದಾಗ ಹಲವಾರು ನಾಟಕಗಳನ್ನು ರಚಿಸಿ ಅಲ್ಲಿಯ ಪ್ರಶಿಕ್ಷಣ ವಿದ್ಯಾರ್ಥಿಗಳಿಂದ ಅವನ್ನು ರಂಗಭೂಮಿಯ ಮೇಲೆ ತಂದು ಜನಮೆಚ್ಚುಗೆ ಗಳಿಸಿದರು. ಆ ವೇಳೆಗೆ ಸಹಕಾರ ಕ್ಷೇತ್ರದಲ್ಲೂ ಇವರು ಹೆಸರು ಮಾಡಿದ್ದರು. ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಕನ್ನಡ ಸಹಕಾರಿ ಹಾಗೂ ಉಡುಪಿಯಿಂದ ಪ್ರಕಟವಾಗುತ್ತಿದ್ದ ಬಾಲಚಂದ್ರ ಮಾಸಪತ್ರಿಕೆಗಳಿಗೆ ಸ್ವಲ್ಪಕಾಲ ಸಂಪಾದಕರಾಗಿ ದುಡಿದರು. ಯಕ್ಷಗಾನ ಕಲೆಯಲ್ಲೂ ಇವರದು ಒಳ್ಳೆಯ ಅಭಿರುಚಿ.

	ಇವರು ಖಗೋಳಶಾಸ್ತ್ರಕ್ಕೆ ಸಂಬಂಧಿಸಿದಂತೆ ಖಗೋಳ ವೈಚಿತ್ರ್ಯ (1930) ಎಂಬ ಪುಸ್ತಕ ಬರೆದಿದ್ದಾರೆ. ಶಿಕ್ಷಣ (1933) ಎಂಬುದು ಶಿಕ್ಷಣಶಾಸ್ತ್ರಕ್ಕೆ ಸಂಬಂಧಿಸಿದ ಕೃತಿ. ನಿಷ್ಕಾಮ ಪ್ರೇಮ (1936) ಕಾದಂಬರಿ. ವಿಧಿಯ ವೈಚಿತ್ರ್ಯ, ಶಶಿಕಾಂತನ ವುಯಿಲ್ (1933), ಸಮಾಜದ್ರೋಹಿ (1932)- ಇವು ಭಾಷಾಂತರ ಕೃತಿಗಳು. ಅಲ್ಲದೆ ನೂತನ ಬಾಲಗಣಿತ, ಹೊಸಗನ್ನಡ ಪಾಠಮಾಲೆ, ಮಕ್ಕಳ ಕತೆಗಳು ಮುಂತಾದ ಪಠ್ಯಪುಸ್ತಕಗಳು ಇವರ ಇತರ ರಚನೆಗಳಾಗಿವೆ.	 	
			
(ಎ.ಪಿ.ಎಸ್‍ಯು.)
ಪರಿಷ್ಕರಣೆ:
ಡಾ|| ಶ್ರೀನಿವಾಸ ಹಾವನೂರ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ